ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಪ್ರಮುಖ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಲಂಚದ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರ ತಂಡ ಬಲೆಗೆ ಕೆಡವಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

​ತೋವಿನಕೆರೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಲೋಕಾಯುಕ್ತರ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳು.

ಖಾತೆ ಬದಲಾವಣೆಗೆ ಲಂಚದ ಬೇಡಿಕೆ: ದೂರುದಾರ ಟಿ.ಕೆ. ಮೊಹಮ್ಮದ್ ಯಾರು?

​ತೋವಿನಕೆರೆ ಗ್ರಾಮದ ನಿವಾಸಿ ಟಿ.ಕೆ. ಮೊಹಮ್ಮದ್ ಎಂಬುವವರು ಈ ಟ್ರ್ಯಾಪ್ ಕಾರ್ಯಾಚರಣೆಗೆ ಕಾರಣರಾಗಿದ್ದಾರೆ. ಮೊಹಮ್ಮದ್ ಅವರು ಮಂಜಮ್ಮ ಹೆಸರಿನಲ್ಲಿದ್ದ ಮನೆ ಮತ್ತು ನಿವೇಶನವನ್ನು ಕಾನೂನು ಬದ್ಧವಾಗಿ ಕ್ರಯಕ್ಕೆ ಖರೀದಿ ಮಾಡಿದ್ದರು. ಕ್ರಯಪತ್ರವು 01/08/2025 ರಂದು ಕೊರಟಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿತ್ತು.

​ಖರೀದಿಯ ನಂತರ, ಅವರು 12/08/2025 ರಂದು ಮನೆಯ ಖಾತೆಯನ್ನು ತಮ್ಮ ಹೆಸರಿಗೆ ಬದಲಾಯಿಸುವಂತೆ ತೋವಿನಕೆರೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.

₹10,800 ರಿಂದ ₹8,000ಕ್ಕೆ ಲಂಚ ಡೀಲ್ ಫೈನಲ್

​ಟಿ.ಕೆ. ಮೊಹಮ್ಮದ್ ಅರ್ಜಿ ಸಲ್ಲಿಸಿದ ಬಳಿಕ ಸುಮಾರು ಎರಡು ತಿಂಗಳು ಕಳೆದರೂ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಕೊಡದೇ ವಿಳಂಬ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ, ದೂರುದಾರರು 09/10/2025 ರಂದು ಗ್ರಾ.ಪಂ. ಕಚೇರಿಗೆ ತೆರಳಿ ಬಿಲ್ ಕಲೆಕ್ಟರ್ ಮಾರುತಿ ಅವರನ್ನು ಸಂಪರ್ಕಿಸಿದಾಗ, ಅವರು ಖಾತೆ ಬದಲಾವಣೆಗೆ ₹10,800 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

​ದಿನಾಂಕ 14/10/2025 ರಂದು ಮೊಹಮ್ಮದ್ ಅವರು ಲಂಚದ ಮೊತ್ತವನ್ನು ಕಡಿಮೆ ಮಾಡುವಂತೆ ಕೇಳಿದಾಗ, ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾ ಇಬ್ಬರೂ ಸೇರಿ ಅಂತಿಮವಾಗಿ ₹8,000 ನೀಡುವಂತೆ ಬೇಡಿಕೆ ಇಟ್ಟಿದ್ದರು.

ಟ್ರ್ಯಾಪ್ ಕಾರ್ಯಾಚರಣೆ ವಿವರಗಳು: ಲಂಚ ಸ್ವೀಕರಿಸುವಾಗಲೇ ಬಂಧನ

​ಅಧಿಕಾರಿಗಳ ಲಂಚದ ಬೇಡಿಕೆಯಿಂದ ಬೇಸತ್ತ ಟಿ.ಕೆ. ಮೊಹಮ್ಮದ್ ಅವರು 15/10/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

​ದೂರು ದಾಖಲಾದ (ಮೊ.ನಂ:08/2025) ಬಳಿಕ, ಪೊಲೀಸ್ ನಿರೀಕ್ಷಕರಾದ ರಾಜು ಟಿ. ಅವರ ನೇತೃತ್ವದ ತಂಡ ತನಿಖೆ ಕೈಗೊಂಡು, ದಿನಾಂಕ 16/10/2025 ರಂದು ಟ್ರ್ಯಾಪ್ ಕಾರ್ಯಾಚರಣೆ ನಡೆಸಿತು. ಬೆಳಿಗ್ಗೆ 10.45 ಗಂಟೆಗೆ ತೋವಿನಕೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಿಲ್ ಕಲೆಕ್ಟರ್ ಮಾರುತಿ ಮತ್ತು ಕಾರ್ಯದರ್ಶಿ ಸುಮಾರವರು ದೂರುದಾರರಿಂದ ₹8,000 ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡ

​ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್ ಕೆ.ಎಂ. ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ರಾಜು.ಟಿ, ಬಿ.ಮೊಮ್ಮದ್ ಸಲೀಂ, ಕೆ.ಸುರೇಶ ಮತ್ತು ಶಿವರುದ್ರಪ್ಪ ಮೇಟಿ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

​ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರಡಿ (ತಿದ್ದುಪಡಿ–2018) ಪ್ರಕರಣ ದಾಖಲಿಸಲಾಗಿದೆ

About The Author

By Admin

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!