‘ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆಯುತ್ತಾರಾ?’ – ಸ್ವಪಕ್ಷದ ಸರ್ಕಾರದ ನಡೆ ಪ್ರಶ್ನಿಸಿದ ಕೆ.ಎನ್. ರಾಜಣ್ಣ

  • ಸಚಿವ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ (K N Rajanna) ಹೊಸ ವಿವಾದ ಸೃಷ್ಟಿ.
  • ಸರ್ಕಾರಿ ಸ್ಥಳಗಳಲ್ಲಿ ಆರ್​ಎಸ್​ಎಸ್​ ಚಟುವಟಿಕೆಗಳಿಗೆ (RSS Activities) ಕಡಿವಾಣ ಹಾಕಲು ಹೊರಟ ಸರ್ಕಾರದ ನಿಲುವಿಗೆ ಪರೋಕ್ಷ ವಿರೋಧ.
  • “ಈದ್ಗಾ ಮೈದಾನ, ರಸ್ತೆಯಲ್ಲಿ ನಮಾಜ್ ಮಾಡುವಾಗ ಅನುಮತಿ ಪಡೆಯುತ್ತಾರಾ?” ಎಂದು ಪ್ರಶ್ನಿಸಿ ಸ್ವಪಕ್ಷದ ನಡೆಯನ್ನು ಪ್ರಶ್ನಿಸಿದರು.
  • ಸರ್ಕಾರದ ಈ ನಿರ್ಧಾರ ‘ಜಾರಿ ಮಾಡಲಾಗದ ಕಾನೂನು’ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ ರಾಜಣ್ಣ.
       ತುಮಕೂರು: ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾಗೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಸ್ವಪಕ್ಷದ ಸರ್ಕಾರಕ್ಕೆ ಇರುಸು ಮುರುಸು ಉಂಟು ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕೆಂಬ ಹೊಸ ನಿಯಮ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಇದು ಪ್ರಮುಖವಾಗಿ ಆರ್ಎಸ್ಎಸ್ (RSS) ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ ಎನ್ನಲಾಗಿದೆ. ಆದರೆ, ರಾಜಣ್ಣ ಅವರು ಸರ್ಕಾರದ ಈ ನಿಲುವನ್ನೇ ಪ್ರಶ್ನಿಸಿ ಅಚ್ಚರಿ ಮೂಡಿಸಿದ್ದಾರೆ.
    RSS ಪರ ಬ್ಯಾಟಿಂಗ್, ಸರ್ಕಾರಕ್ಕೆ ಮುಜುಗರ
    ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಆರ್ಎಸ್ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸರ್ಕಾರದ ಧೋರಣೆಯನ್ನು ಪರೋಕ್ಷವಾಗಿ ಟೀಕಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರು ಅನುಮತಿ ಪಡೆದು ಕಾರ್ಯಕ್ರಮ ಮಾಡಿ ಎಂದು ಹೇಳಿದ್ದಾರೆ ಹೊರತು ಆರ್ಎಸ್ಎಸ್ ಬ್ಯಾನ್ (RSS Ban) ಮಾಡಿ ಎಂದು ಹೇಳಿಲ್ಲ ಎಂದಿದ್ದಾರೆ.
    ಆದರೆ, ಈ ನಿಯಮದ ಜಾರಿಯ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದ ಅವರು, ನೇರವಾಗಿ ಇಸ್ಲಾಮಿಕ್ ಸಮುದಾಯದ ಪ್ರಾರ್ಥನಾ ಪದ್ಧತಿಯನ್ನು ಉದಾಹರಣೆಯಾಗಿ ನೀಡಿದರು.

“ಈದ್ಗಾ ಮೈದಾನದಲ್ಲಿ, ರಸ್ತೆಯಲ್ಲೇ ನಮಾಜ್ ಮಾಡುತ್ತಾರೆ. ಅವರು (ಮುಸ್ಲಿಂ) ಪರ್ಮಿಷನ್ ತೆಗೆದುಕೊಳ್ಳುತ್ತಾರಾ? ರಸ್ತೆಯಲ್ಲಿ ನಮಾಜ್ ಮಾಡಲು ಪರ್ಮಿಷನ್ ಕೊಡಿ ಎಂದು ಅವರು ಬರ್ತಾರಾ? ಅಥವಾ ಪರ್ಮಿಷನ್ ತೆಗೆದುಕೊಳ್ಳಿ ಎಂದು ನಾವು ಹೇಳುತ್ತೀವಾ? ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ,” ಎಂದು ರಾಜಣ್ಣ ತಮ್ಮದೇ ಸರ್ಕಾರದ ನಡೆಯನ್ನು ಪ್ರಶ್ನಿಸಿದರು.

ಸಂಘಟನೆಗಳ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ: ಸರ್ಕಾರದ ನಿರ್ಧಾರ
ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬೆನ್ನಲ್ಲೇ ಈ ನಿಯಮವನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿತ್ತು. ಇದಕ್ಕೆ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾಗ, ಹಿರಿಯ ನಾಯಕರಾದ ರಾಜಣ್ಣನವರ ಈ ಹೇಳಿಕೆ ಸ್ವಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿಂದೆ ರಾಹುಲ್ ಗಾಂಧಿ ಪ್ರಕರಣದಲ್ಲಿ ಮಾಡಿದ ಟೀಕೆಗಳಿಗಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಾಜಣ್ಣ, ಈಗ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

About The Author

By Admin

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!