
ತುಮಕೂರು: ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಹಲವು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಗುಬ್ಬಿ, ತಿಪಟೂರು, ತುರುವೇಕೆರೆ ಸೇರಿದಂತೆ ಜಿಲ್ಲೆಯ ಇತರೆ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ.
ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಯ್ತು, ಚಾಲಕ ಪಾರು:
ಗುಬ್ಬಿ ತಾಲೂಕಿನ ತೋಟಸಾಗರ ಗ್ರಾಮದ ಬಳಿ ಹಳ್ಳದಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಮಳೆ ನೀರಿನಲ್ಲಿ ಪರಮೇಶ್ ಎಂಬುವವರ ಕಾರು ಕೊಚ್ಚಿ ಹೋಗಿದೆ. ತಕ್ಷಣ ಎಚ್ಚೆತ್ತುಕೊಂಡ ಪರಮೇಶ್ ಅವರು ಕಾರಿನಿಂದ ಹೊರ ಜಿಗಿದು ಈಜಿಕೊಂಡು ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಕಾರು ಸುಮಾರು ಒಂದು ಕಿಲೋ ಮೀಟರ್ವರೆಗೂ ನೀರಿನಲ್ಲಿ ತೇಲಿಕೊಂಡು ಹೋಗಿದೆ. ನಂತರ ಸ್ಥಳೀಯರ ಸಹಕಾರದಿಂದ ಕಾರನ್ನು ಹೊರತೆಗೆಯಲಾಗಿದೆ. ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶ:
ತಿಪಟೂರು ಮತ್ತು ಗುಬ್ಬಿ ಭಾಗಗಳಲ್ಲಿ ಹಳ್ಳ-ಕೊಳ್ಳಗಳು ಭರ್ತಿಯಾಗಿ ಭಾರಿ ಪ್ರಮಾಣದಲ್ಲಿ ಹರಿದು ಬಂದ ನೀರು ತೋಟಗಳಿಗೆ ನುಗ್ಗಿದ್ದು, ಅಡಿಕೆ, ತರಕಾರಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ.
ಮೀನು ಕೊಚ್ಚಿ ಹೋದ ಘಟನೆ:
ಕುಣಿಗಲ್ ಮತ್ತು ಚಿಕ್ಕನಾಯಕನಹಳ್ಳಿ ಭಾಗದಲ್ಲಿಯೂ ಭಾರಿ ಮಳೆಯಾಗಿದ್ದು, ಕೆರೆಗಳಲ್ಲಿ ಸಾಕಾಣಿಕೆ ಮಾಡಲಾಗಿದ್ದ ಮೀನುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಮೀನುಗಳನ್ನು ಸಂರಕ್ಷಿಸಲು ಗುತ್ತಿಗೆದಾರರು ಬಲೆಗಳನ್ನು ಹಾಕಿ ಹರಸಾಹಸ ಪಡಬೇಕಾಯಿತು.
