ಬೆಳಗಾವಿ: ‘ನವೆಂಬರ್ ಕ್ರಾಂತಿ’ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಎಂಎಲ್‌ಸಿ ಡಾ. ಯತೀಂದ್ರ ಅವರು ನೀಡಿದ್ದ ಹೇಳಿಕೆಯು ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಕಿಚ್ಚು ಹಚ್ಚಿಸಿದ ಬೆನ್ನಲ್ಲೇ, ಇದೀಗ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತಾವು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ:
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಯತೀಂದ್ರ ಅವರು, “ನನ್ನ ತಂದೆಯವರು (ಸಿಎಂ ಸಿದ್ದರಾಮಯ್ಯ) ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ಧಾಂತದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಡ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಆ ರೀತಿ ಸೈದ್ಧಾಂತಿಕವಾಗಿ ರಾಜಕಾರಣ ಮಾಡುವವರನ್ನ ಅವರು ಲೀಡ್ ಮಾಡಲಿ ಅನ್ನೋ ಉದ್ದೇಶ ಇಟ್ಟುಕೊಂಡು ಹೇಳಿದ್ದೇನೆ. ರಾಜಕೀಯ ಉತ್ತರಾಧಿಕಾರಿ ಬಗ್ಗೆ ನಾನು ಮಾತನಾಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
2028ರ ನಂತರ ಸತೀಶ್ ಜಾರಕಿಹೊಳಿ ಮುನ್ನಡೆಸಲಿ:
“2028ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ತಂದೆಯವರು ಸ್ಪರ್ಧಿಸಲ್ಲ ಅಂದಿದ್ದಾರೆ. ಅದು ಆದ ಮೇಲೆ ಜಾತ್ಯತೀತ ಸಿದ್ಧಾಂತ ಇಟ್ಟುಕೊಂಡ ಸಾಕಷ್ಟು ನಾಯಕರಿದ್ದಾರೆ. ಇವರೆಲ್ಲರನ್ನೂ ಸತೀಶ್ ಜಾರಕಿಹೊಳಿ ಮುನ್ನಡೆಸಲಿ,” ಎಂದ ಯತೀಂದ್ರ, “2028ರ ನಂತರ ಆ ರೀತಿ ಲೀಡ್ ಮಾಡೋರು ಬೇಕು. ಸೈದ್ಧಾಂತಿಕ ರಾಜಕಾರಣ ಮಾಡುವವರ ಪೈಕಿ ಸಚಿವ ಸತೀಶ್ ಸಹ ಒಬ್ಬರು. ಆ ರೀತಿ ಸಿದ್ಧಾಂತ ಇಟ್ಟುಕೊಂಡವರಿಗೆ ಸತೀಶ್ ಮಾರ್ಗದರ್ಶನ ಮಾಡಲಿ. ನಾಳೆಯೇ ಕೊನೆ ದಿನ ಅಲ್ಲ, 2028ರ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಳಿರುವೆ,” ಎಂದು ವಿವರಿಸಿದರು.
ಸಿಎಂ ಬದಲಾವಣೆ ಚರ್ಚೆ ಇಲ್ಲ:
‘ನವೆಂಬರ್ ಕ್ರಾಂತಿ’ ಕೇವಲ ಊಹಾಪೋಹ. ನಾಯಕತ್ವದ ಬದಲಾವಣೆ ಪ್ರಶ್ನೆ ಇಲ್ಲ, ಪಕ್ಷದಲ್ಲಿ ಆ ರೀತಿ ಚರ್ಚೆ ನಡೆದಿಲ್ಲ ಎಂದು ಹೇಳಿದ ಯತೀಂದ್ರ, “ಆ ರೀತಿ ಸಿಎಂ ಆಗುವ ಅರ್ಹತೆ ಇದ್ದವರು ಹಲವು ನಾಯಕರು ಇದ್ದಾರೆ. ಈ ಬಗ್ಗೆ ಎಲ್ಲಾ ಶಾಸಕರು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಸದ್ಯಕ್ಕೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ,” ಎಂದರು.
ಸಿದ್ದರಾಮಯ್ಯ ಸ್ಥಾನ ತುಂಬುವ ಶಕ್ತಿ ಸತೀಶ್‌ಗೆ ಇದೆ:
“ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್‌ಗೆ ಖಂಡಿತಾ ಇದೆ. ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯಾದ ಬಳಿಕ ಆ ಸ್ಥಾನ ತುಂಬುವ ಶಕ್ತಿ ಕೆಲವೇ ನಾಯಕರಲ್ಲಿ ಸತೀಶ್ ಜಾರಕಿಹೊಳಿಗೆ ಇದೆ,” ಎಂದು ಡಾ. ಯತೀಂದ್ರ ತಿಳಿಸಿದರು.
ಯತೀಂದ್ರ ಅವರ ಮೂಲ ಹೇಳಿಕೆ:
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, “ನಮ್ಮ ತಂದೆಯವರು ರಾಜಕೀಯದ ಕೊನೆಗಾಲದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ತತ್ವ, ಸಿದ್ಧಾಂತ ಇರುವ ನಾಯಕ ಬೇಕು. ಮಾರ್ಗದರ್ಶನ ಮಾಡಿ ನೇತೃತ್ವ ವಹಿಸಿಕೊಳ್ಳುವ ನಾಯಕ ಬೇಕು. ಸಚಿವ ಸತೀಶ್ ಜಾರಕಿಹೊಳಿ ಅಂತಹ ಜವಾಬ್ದಾರಿ ನಿಭಾಯಿಸುತ್ತಾರೆ” ಎಂದು ಎಂಎಲ್‌ಸಿ ಡಾ. ಯತೀಂದ್ರ ಹೇಳಿದ್ದರು.
