ನ.1ರಿಂದ ಬ್ಯಾಂಕ್‌ಗಳ ‘ನಾಮಿನಿ ನಿಯಮ’ದಲ್ಲಿ ಬದಲಾವಣೆ: ಇನ್ಮುಂದೆ 4 ನಾಮಿನಿಗಳಿಗೆ ಅವಕಾಶ!
ನವದೆಹಲಿ: ನವೆಂಬರ್ 1ರಿಂದ ಬ್ಯಾಂಕ್‌ಗಳ ನಾಮಿನಿ ನಿಯಮದಲ್ಲಿ (Nomination rules) ಮಹತ್ವದ ಬದಲಾವಣೆ ಆಗಲಿದ್ದು, ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಇನ್ನು ಮುಂದೆ ಒಬ್ಬರಿಗಿಂತ ಹೆಚ್ಚು (ಗರಿಷ್ಠ 4) ನಾಮಿನಿಗಳನ್ನು ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ (Finance Department) ತಿಳಿಸಿದೆ.
ಈವರೆಗೆ ಒಂದು ಬ್ಯಾಂಕ್ ಖಾತೆ ಅಥವಾ ಲಾಕರ್‌ಗೆ ಕೇವಲ ಒಬ್ಬ ನಾಮಿನಿಗೆ ಮಾತ್ರ ಅವಕಾಶವಿತ್ತು. ಆದರೆ, ನವೆಂಬರ್ 1 ರಿಂದ ಜಾರಿಗೆ ಬರುವ ಹೊಸ ನಿಯಮದ ಪ್ರಕಾರ, ಖಾತೆದಾರರು ತಮ್ಮ ಖಾತೆ ಅಥವಾ ಲಾಕರ್‌ಗಳಿಗೆ ನಾಲ್ವರು ನಾಮಿನಿಗಳನ್ನು ಆಯ್ಕೆ ಮಾಡಬಹುದು.
ಹೊಸ ನಿಯಮಗಳು ಮತ್ತು ಪ್ರಯೋಜನಗಳು:
- ಈ ಬದಲಾವಣೆಯಿಂದಾಗಿ ಕ್ಲೈಮ್ ಸೆಟಲ್‌ಮೆಂಟ್‌ಗಳು ಮತ್ತಷ್ಟು ನೇರ ಹಾಗೂ ಸುಲಭವಾಗಲಿದೆ.
- ಡೆಪಾಸಿಟ್ ಮಾಡುವಾಗಲೇ ಖಾತೆದಾರರು ಈ ನಾಲ್ವರು ನಾಮಿನಿಗಳನ್ನು ಆಯ್ಕೆ ಮಾಡಬಹುದು.
- ಠೇವಣಿದಾರರು ಮೃತಪಟ್ಟ ನಂತರ, ಈ ನಾಮಿನಿಗಳು ಕ್ರಮಸಂಖ್ಯೆಗೆ ಅನುಗುಣವಾಗಿ ಖಾತೆದಾರರ ಹಣಕಾಸಿಗೆ ಉತ್ತರಾಧಿಕಾರಿಗಳಾಗಲಿದ್ದಾರೆ.
- ಇದರಿಂದಾಗಿ ಯಾವುದೇ ಗೊಂದಲಗಳಿಲ್ಲದೆ, ನಿಗದಿತ ಹಣಕಾಸಿನ ಭಾಗವು ಆ ನಾಮಿನಿಗಳಿಗೆ ನೇರವಾಗಿ ವರ್ಗಾವಣೆ ಆಗಲಿದೆ.
ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯಿದೆ-2025 ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಹೇಳಿದೆ.
