ಹೆತ್ತವ್ವನ ಹೆಗಲ ಮೇಲೆ ಕೂರಿಸಿಕೊಂಡು ಪಂಡರಾಪುರದ ವಿಠ್ಠಲನ ದರ್ಶನಕ್ಕೆ ಹೊರಟ ಮಗ

ಸದಾಶಿವ ಬಾನಿ ಎಂಬವರು ತಮ್ಮ 85 ವರ್ಷದ ತಾಯಿ ಸತ್ಯವ್ವ ಬಾನಿ ಅವರನ್ನು ಕಳೆದ ನಾಲ್ಕು ವರ್ಷಗಳಿಂದ 220 ಕಿಲೋಮೀಟರ್ ದೂರದ ಮಹಾರಾಷ್ಟ್ರದ ಪಂಡರಾಪುರದವರೆಗೆ ಹೆಗಲ ಮೇಲೆ ಹೊತ್ತುಕೊಂಡೇ ತೆರಳಿ ದರ್ಶನ ಮಾಡಿಸುತ್ತಿದ್ದಾರೆ.

ಚಿಕ್ಕೋಡಿ(ಬೆಳಗಾವಿ): ತಂದೆ-ತಾಯಿಗೆ ವಯಸ್ಸಾದರೆ ಸಾಕು, ಅವರನ್ನು ನೋಡಿಕೊಳ್ಳಲು ಹಿಂದೇಟು ಹಾಕುವವರೇ ಈ ಕಾಲದಲ್ಲಿ ಜಾಸ್ತಿ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ಹಿರಿಜೀವಕ್ಕೆ ಆಸರೆಯಾಗಬೇಕಿದ್ದ ಮಕ್ಕಳೇ ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ದುರಂತ ಕಾಲದಲ್ಲಿ ನಾವಿದ್ದೇವೆ.

ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ತಾಯಿಯನ್ನು ಹೆಗಲ ಮೇಲೆಯೇ ಹೊತ್ತುಕೊಂಡು ಮಹಾರಾಷ್ಟ್ರದ ಪಂಢರಪುರ ವಿಠ್ಠಲ ಹಾಗೂ ರುಕ್ಮಿಣಿಯ ದರ್ಶನ ಮಾಡಿಸುತ್ತಿದ್ದಾರೆ. ಈ ಮೂಲಕ ಆಧುನಿಕ ಕಾಲಘಟ್ಟದ ಶ್ರವಣ ಕುಮಾರನಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಸದಾಶಿವ ಬಾನಿ ಅವರು 85 ವರ್ಷದ ತಮ್ಮ ತಾಯಿ ಸತ್ಯವ್ವ ಬಾನಿ ಅವರನ್ನು ಕಳೆದ ನಾಲ್ಕು ವರ್ಷಗಳಿಂದಲೂ 220 ಕಿಲೋಮೀಟರ್ ದೂರದ ಮಹಾರಾಷ್ಟ್ರದ ಪಂಡರಾಪುರದವರೆಗೆ ಹೆಗಲ ಮೇಲೆೆಯೇ ಹೊತ್ತುಕೊಂಡು ದರ್ಶನ ಮಾಡಿಸುತ್ತಿದ್ದಾರೆ. ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ, ಕುಗ್ಗದೆ ಕೇವಲ ಪಾಂಡುರಂಗನ ಭಕ್ತಿ ಹಾಗೂ ತಮ್ಮಲ್ಲಿರುವ ಅದಮ್ಯ ಮಾತೃಪ್ರೇಮದಿಂದ ಈ ಕೆಲಸ ಮಾಡುತ್ತಿದ್ದಾರೆ.

ಬಾನಿ ಕುಟುಂಬಸ್ಥರು ವಿಠ್ಠಲನ ಪರಮಭಕ್ತರು. ದೇವರನ್ನು ಕಾಣಲು ತಂದೆ-ತಾಯಿಯನ್ನು ಗೌರವದಿಂದ ಕಂಡರೆ ಮಾತ್ರ ಪರಮಾತ್ಮನನ್ನು ಕಾಣಲು ಸಾಧ್ಯ ಎಂಬ ಮನೋಭಾವ ಇವರದ್ದು. ನವೆಂಬರ್ ಎರಡರಂದು ಕಾರ್ತಿಕ ಏಕಾದಶಿಯ ಹಿನ್ನೆಲೆಯಲ್ಲಿ ಇಂದು ಗ್ರಾಮದಿಂದ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

ಇವರು ಪ್ರತಿನಿತ್ಯ 20ರಿಂದ 25 ಕಿಲೋಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಎಲ್ಲಿ ಸೂರ್ಯಾಸ್ತ ಆಗುವುದೋ ಅಲ್ಲೇ ರಾತ್ರಿ ಕಳೆದು ಮತ್ತೆ ಮುಂಜಾನೆ ಯಾತ್ರೆ ಮುಂದುವರೆಸುತ್ತಾರೆ. ಏಕಾದಶಿಗೆ ಒಂದು ದಿನ ಬಾಕಿ ಇರುವಾಗ ಪಂಢರಪುರ ತಲುಪುವ ನಿರೀಕ್ಷೆ ಇವರದ್ದು.

ಈ ಕುರಿತು ಸದಾಶಿವ ಬಾನಿ ಅವರು ಪ್ರತಿಕ್ರಿಯಿಸಿ, “ಈ ಭೂಮಿಯ ಮೇಲೆ ಸಾಕಷ್ಟು ಅನ್ಯಾಯಗಳು ನಡೆಯುತ್ತಿವೆ. ತಂದೆ-ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿಲ್ಲ. ಪೋಷಕರನ್ನು ಕಾಲಕಸಕ್ಕೆ ಸಮನಾಗಿ ಕಾಣುತ್ತಿದ್ದಾರೆ. ದೇಶದಲ್ಲಿ ಎಲ್ಲರೂ ತಾಯಿ-ತಂದೆಯ ಸೇವೆ ಮಾಡಬೇಕು. ಮದುವೆಯಾದ ಬಳಿಕ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಹೀಗಾಗಿ, ದೇವರಿಗೂ ಕೂಡ ಶಕ್ತಿ ಇಲ್ಲದಂತಾಗುತ್ತಿದೆ. ಅದಕ್ಕಾಗಿ ನಾನು ತಂದೆ-ತಾಯಿಯ ಮಹತ್ವ ತಿಳಿಸಬೇಕೆಂಬ ಸಂಕಲ್ಪ, ಪಾಂಡುರಂಗನ ದಯೆ, ಭಕ್ತಿಯಿಂದ ತಾಯಿಯ ಸೇವೆ ಮಾಡುತ್ತಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.

“8ರಿಂದ 9 ದಿನಗಳ ಕಾಲ ನಡೆದು 220 ಕಿ.ಮೀ ದೂರ ಪ್ರಯಾಣ ಮಾಡುತ್ತೇನೆ. ಸತತ ಐದನೇ ವರ್ಷವೂ ತಾಯಿಯನ್ನು ಹೊತ್ತು ವಿಠ್ಠಲನ ದರ್ಶನ ಮಾಡಿಸುತ್ತಿದ್ದೇನೆ. ನಮ್ಮ ಸಹೋದರನ ಪ್ರೇರಣೆಯಿಂದ ಪಾಂಡುರಂಗನ ಮಾಲೆ ಧರಿಸಿ ತಾಯಿಯನ್ನು ಹೊತ್ತು ಸಾಗುವ ಯೋಚನೆ ಮಾಡಿ, ಹೀಗೆ ಸೇವೆ ಮಾಡುತ್ತಿರುವುದು ತೃಪ್ತಿ ತಂದಿದೆ” ಎಂದು ಹೇಳಿದರು.

“ನಾನು ತಾಯಿಯನ್ನು ಹೆಗಲ ಮೇಲೆ ಹೊತ್ತು ನಡೆಯುವಾಗ ಜನರು ನಮಸ್ಕರಿಸಿ ಪ್ರೀತಿಯಿಂದ ನನಗೆ ಕಲಿಯುಗದ ಶ್ರವಣಕುಮಾರ ಅನ್ನುತ್ತಾರೆ. ಇದು ನನಗೆ ಮತ್ತಷ್ಟು ಖುಷಿ ತಂದಿದೆ. ಜೀವನದಲ್ಲಿ ತಾಯಿ ತಂದೆಯರ ಹೊರತು ಬೇರಾವುದು ಮುಖ್ಯವಲ್ಲ. ಪಾಂಡುರಂಗನ ದಯೆಯಿಂದ ಇದೆಲ್ಲ ಸಾಧ್ಯವಾಗಿದೆ. ಹೆತ್ತವರ ಸೇವೆ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸುತ್ತೇವೆ” ಎಂದು ಹೇಳಿದರು.

“ಚಂದ್ರಬಾಗಾ ನದಿಯಲ್ಲಿ ಸ್ನಾನ ಮಾಡುವಾಗ ನನಗೆ ಜ್ಞಾನೋದಯವಾದಂತಾಗಿ 80 ವರ್ಷದ ತಾಯಿಯನ್ನು ಹೆಗಲ ಮೇಲೆ ಹೊತ್ತು ಸಾಗುವ ನಿರ್ಧಾರ ಮಾಡಿದೆ. ಭಕ್ತಿಯಿಂದ ಹೆತ್ತವರ ಸೇವೆ ಮಾಡಬೇಕು. ಜೀವನದಲ್ಲಿ ಒಳ್ಳೆಯ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ” ಎಂದು ಬಾನಿ ತಿಳಿಸಿದರು.

ತಾಯಿ ಸತ್ಯವ್ವ ಬಾನಿ ಮಾತನಾಡಿ, “ನನ್ನ ಮಗನೇ ನನಗೆ ಎಲ್ಲವೂ. ಪಾಂಡುರಂಗನ ಭಕ್ತಿಯಿಂದ ನನ್ನ ಮಗ ಪ್ರೀತಿಯಿಂದ ಕಾಣುತ್ತಿದ್ದಾನೆ. ಅವನಿಂದಲೇ ನಾನು ಜೀವನದಲ್ಲಿ ಬೆಳಕನ್ನು ಕಾಣುವಂತಾಗಿದೆ. ಅವನೊಬ್ಬ ನನ್ನ ಜೊತೆಗಿದ್ದರೆ ನನಗೆ ಸಂತೋಷ” ಎಂದರು.

“ನನ್ನ ಸೇವೆ ಮಾಡುತ್ತಿರುವ ಮಗ ಸುಖವಾಗಿರಬೇಕು. ಯಾವತ್ತೂ ಆನಂದದಿಂದ ಜೀವನ ಕಳೆಯಬೇಕು, ಎಂಟು ದಿನಗಳ ಕಾಲ ಕಾಲ್ನಡಿಗೆಯಲ್ಲಿ ಸಾಗಿ ಏಕಾದಶಿಯಂದು ಪಾಂಡುರಂಗನ ದರ್ಶನ ಮಾಡಿಸುತ್ತಾನೆ. ನನ್ನ ಉಪಚಾರದ ಜೊತೆಗೆ ಪ್ರೀತಿಯ ಮಾತುಗಳನ್ನೂ ಹೇಳುವ ಆತನ ಬೆನ್ನ ಮೇಲೆಯೇ ನಾನು ಕೊನೆಯುಸಿರೆಳೆಯಬೇಕು. ನನ್ನ ಮಗನೇ ನನ್ನ ದೊಡ್ಡ ಶಕ್ತಿ” ಎಂದು ಭಾವುಕರಾದರು.

ಕೆಂಪಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ಪ ನಾಯಿಕ ಅವರು ಮಾತನಾಡಿ, “ಸದಾಶಿವ ಬಾನಿ ಅವರು ತಮ್ಮ ತಾಯಿಯ ಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪೋಷಕರನ್ನು ಕಡೆಗಣಿಸುವ ಇಂದಿನ ದಿನಗಳಲ್ಲಿ ತಾಯಿಯ ಹಿರಿಮೆ ಸಾರುವ ಮೂಲಕ ಅವರ ಸೇವೆ ಮಾಡಬೇಕೆಂಬ ಸಂದೇಶವನ್ನು ಅವರು ಯುವಪೀಳಿಗೆಗೆ ನೀಡುತ್ತಿದ್ದಾರೆ. ಇವರನ್ನು ನೋಡಿ ಸಮಾಜದಲ್ಲಿ ತಂದೆ ತಾಯಿಯರ ಸೇವೆ ಮಾಡುವ ಮನೋಭಾವ ಜನರಲ್ಲಿ ಮೂಡುತ್ತದೆ. ಆಧುನಿಕ ಕಾಲದಲ್ಲಿ ಇವರು ಮಾಡುತ್ತಿರುವ ಮಾತೃ ಸೇವೆಯಿಂದ ನಮ್ಮ ಭಾಗದಲ್ಲಿ ಹಂತ ಹಂತವಾಗಿ ಬದಲಾವಣೆಯ ಮನೋಭಾವ ಜನರಲ್ಲಿ ಹೆಚ್ಚುತ್ತಿದೆ. ತಂದೆ ತಾಯಿಯರ ಸೇವೆ ಮಾಡಬೇಕೆಂಬ ಮನಸ್ಥಿತಿಗಳು ಅಧಿಕವಾಗಿವೆ. ಇವರ ಈ ಪ್ರೀತಿ ಬಾಂಧವ್ಯ ಎಲ್ಲರಿಗೂ ಮಾದರಿಯಾಗಲಿ” ಎಂದು ಆಶಯ ವ್ಯಕ್ತಪಡಿಸಿದರು.

ಭಕ್ತ ರಮೇಶ್ ಗಡ್ಕರಿ ಮಾತನಾಡಿ, “ನಾವು ಹಲವು ವರ್ಷಗಳಿಂದ ದಿಂಡಿಯಾತ್ರೆಯಲ್ಲಿ ಸಾಗಬೇಕು, ಪಾಂಡುರಂಗನ ದರ್ಶನಕ್ಕೆ ಹೊರಡಬೇಕೆಂಬ ನಿರ್ಧಾರ ಮಾಡಿದ್ದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ, ಇವರು ಹೀಗೆ ತಾಯಿಯನ್ನು ಹೊತ್ತು ಸಾಗುವ ವಿಚಾರ ತಿಳಿದು ಸಂತಸವಾಯಿತು. ತಕ್ಷಣ ಬಾನಿ ಅವರನ್ನು ಭೇಟಿಯಾಗಿ ಮಾಹಿತಿ ಪಡೆದು, ಅವರು ತಾಯಿಯನ್ನು ಹೊತ್ತು ಸಾಗುವ ಮಾರ್ಗ ಮಧ್ಯೆ ಇರುವ ನಮ್ಮ ಮನೆಗೆ ಅವರನ್ನು ಆಹ್ವಾನಿಸಿ ದರ್ಶನ ಪಡೆದೆವು, ಬಳಿಕ ಹೀಗೆ ಮುಂದುವರೆದ ಈ ಒಡನಾಟ ಅವರ ಜೊತೆ ನನ್ನನ್ನು ಬೆಸೆಯುವಂತೆ ಮಾಡಿದೆ” ಎಂದು ಹೇಳಿದರು.

About The Author

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!