ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಸಂಪುಟ ಪುನಾರಚನೆಗೆ ಒಪ್ಪಿಗೆ ಕೊಟ್ಟರೂ ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ಎರಡೂವರೆ ವರ್ಷಗಳ ನಂತರವೂ ಸಿಎಂ ಸಿದ್ದರಾಮಯ್ಯ ಮುಂದುವರಿಕೆ
ಬೆಂಗಳೂರಿನಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
- “ಸಚಿವ ಸಂಪುಟ ಪುನಾರಚನೆ ಸದ್ಯಕ್ಕಿಲ್ಲ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಇದೀಗ ಎರಡೂವರೆ ವರ್ಷ ಆಗಿದೆ. ಎರಡೂವರೆ ವರ್ಷ ಆದ ಬಳಿಕ ಸಂಪುಟ ಪುನಾರಚನೆ ಮಾಡಲಿಕ್ಕೆ ಅನುಮತಿ ಸಿಕ್ಕರೂ ಸಿಎಂ ಬದಲಾವಣೆ ಇಲ್ಲ.”
- “ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎಂದು ಹೈಕಮಾಂಡ್ ಘೋಷಣೆ ಮಾಡಲಿದೆ ಎಂಬುವುದು ನನ್ನ ನಿರೀಕ್ಷೆ” ಎಂದು ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
- ಒಂದು ವೇಳೆ ಬದಲಾವಣೆ ಮಾಡಬೇಕು ಎಂಬ ವಿಚಾರ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಮತ್ತು ಅದೇ ನಡೆಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.
ದಲಿತ ಸಿಎಂ ಕೂಗು ಮತ್ತು ಹೈಕಮಾಂಡ್ ತೀರ್ಮಾನ
ರಾಜ್ಯದಲ್ಲಿ ಆಗಾಗ್ಗೆ ಕೇಳಿಬರುತ್ತಿರುವ ದಲಿತ ಸಿಎಂ ಕೂಗಿನ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, “ದಲಿತ ಸಿಎಂ ಕೂಗು ತಪ್ಪೇನಿದೆ? ದಲಿತ ಸಿಎಂ ಆದರೆ ಸಂತೋಷ ಪಡಬೇಕು. ಆದರೆ ಯಾರು ಆಗಬೇಕು ಎಂಬುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದು ಸ್ಪಷ್ಟಪಡಿಸಿದರು.
ಐದು ವರ್ಷ ನಾನೇ ಸಿಎಂ: ಸಿದ್ದರಾಮಯ್ಯ ಪ್ರತಿಕ್ರಿಯೆ
ಈ ಹಿಂದೆ ರಾಜಣ್ಣ ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು.
“ಅದು ರಾಜಣ್ಣ ಅವರ ಸ್ವಂತ ಅಭಿಪ್ರಾಯ. ಆದರೆ ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ” ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ರೇಸ್ನಲ್ಲಿ ಇತರ ನಾಯಕರು ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಯಲ್ಲಿ ಇರುವವರನ್ನು ತಪ್ಪಿಸಲು ಆಗಲ್ಲ. ಕೇಳೋದು ಅವರ ಹಕ್ಕು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ,” ಎಂದರು.
ಬಿಹಾರ ಚುನಾವಣೆ ಬಳಿಕ ತೀರ್ಮಾನ: ಡಾ. ಪರಮೇಶ್ವರ್
ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಅಗತ್ಯವಿದ್ದರೆ ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ ಎಂದು ತಿಳಿಸಿದ್ದಾರೆ.
ಇತರೆ ಬೆಳವಣಿಗೆ: ಹೈಕೋರ್ಟ್ ಸೂಚನೆಯಂತೆ ಮಂಗಳವಾರ ಚಿತ್ತಾಪುರದಲ್ಲಿ ಶಾಂತಿ ಸಭೆ ನಡೆಯಲಿದ್ದು, ಈ ಸಭೆಯ ಬೆಳವಣಿಗೆಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ನ್ಯಾಯಾಲಯದ ಸೂಚನೆಯೇ ಅಂತಿಮವಾಗಿದ್ದು, ಇದರಲ್ಲಿ ಯಾರದೇ ಹಸ್ತಕ್ಷೇಪ ಇರುವುದಿಲ್ಲ ಎಂದು ರಾಜಣ್ಣ ತಿಳಿಸಿದರು.
