ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತ ವನಿತೆಯರು; ಶಫಾಲಿ, ದೀಪ್ತಿ ಶರ್ಮಾ ಅಬ್ಬರ!
ಮುಂಬೈ: ಕೋಟ್ಯಂತರ ಭಾರತೀಯರ ಬಹುದಿನಗಳ ಕನಸು ನನಸಾಗಿದೆ! 2025ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್ (Women’s ODI World Cup Final 2025) ಪಂದ್ಯದಲ್ಲಿ ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು (India vs South Africa) ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದು ಇತಿಹಾಸ ನಿರ್ಮಿಸಿದೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಐತಿಹಾಸಿಕ ಪಂದ್ಯದಲ್ಲಿ ಭಾರತದ ಸಿಂಹಿಣಿಯರು, ಸಮಗ್ರ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದು ಭಾರತ ಮಹಿಳಾ ಕ್ರಿಕೆಟ್ಗೆ ಒಂದು ಸ್ಮರಣೀಯ ಕ್ಷಣವಾಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಭಾರತದ ಪ್ರಾಬಲ್ಯ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ವನಿತಾ ಪಡೆ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 246 ರನ್ ಗಳಿಸಲಷ್ಟೇ ಶಕ್ತವಾಗಿ, ಭಾರತಕ್ಕೆ 52 ರನ್ಗಳ ಭರ್ಜರಿ ಜಯವನ್ನು ಒಪ್ಪಿಸಿತು. ಈ ಗೆಲುವಿನೊಂದಿಗೆ ಭಾರತ ಮೂರನೇ ಬಾರಿಗೆ ವಿಶ್ವಕಪ್ ಫೈನಲ್ಗೇರಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.
ಗೆಲುವಿನ ರೂವಾರಿಗಳು: ಶಫಾಲಿ, ದೀಪ್ತಿ ಅಬ್ಬರ
ಭಾರತದ ಐತಿಹಾಸಿಕ ಗೆಲುವಿನಲ್ಲಿ ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಮತ್ತು ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ ಅವರ ಪ್ರದರ್ಶನ ನಿರ್ಣಾಯಕ ಪಾತ್ರ ವಹಿಸಿತು.
- ಶಫಾಲಿ ವರ್ಮಾ: ಬದಲಿ ಆಟಗಾರ್ತಿಯಾಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಶಫಾಲಿ, ಮೊದಲು ಬ್ಯಾಟಿಂಗ್ನಲ್ಲಿ ಸಿಡಿಲಬ್ಬರದ 87 ರನ್ಗಳ ಇನ್ನಿಂಗ್ಸ್ ಆಡಿದರು. ನಂತರ ಬೌಲಿಂಗ್ನಲ್ಲೂ ಪ್ರಮುಖ 2 ವಿಕೆಟ್ಗಳನ್ನು ಪಡೆದು ಮಿಂಚಿದರು.
- ದೀಪ್ತಿ ಶರ್ಮಾ: ಆಲ್ರೌಂಡರ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ ದೀಪ್ತಿ, ಬ್ಯಾಟಿಂಗ್ನಲ್ಲಿ 58 ರನ್ಗಳ ಉಪಯುಕ್ತ ಕೊಡುಗೆ ನೀಡಿದರೆ, ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐದು ವಿಕೆಟ್ಗಳ ಗೊಂಚಲು ಪಡೆಯುವುದರ ಜೊತೆಗೆ ಒಬ್ಬರನ್ನು ರನೌಟ್ ಕೂಡ ಮಾಡಿದರು.
ಆರಂಭಿಕರ ಶತಕದ ಜೊತೆಯಾಟ, ಮಧ್ಯಮ ಕ್ರಮಾಂಕದ ಬೆಂಬಲ
ಟಾಸ್ ಸೋತರೂ ಬ್ಯಾಟಿಂಗ್ನಲ್ಲಿ ಭಾರತದ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಉತ್ತಮ ಅಡಿಪಾಯ ಹಾಕಿದರು. ಈ ಇಬ್ಬರು ಮೊದಲ ವಿಕೆಟ್ಗೆ 104 ರನ್ಗಳ ಬಲಿಷ್ಠ ಜೊತೆಯಾಟ ಆಡಿದರು. ಮಂಧಾನ 45 ರನ್ಗಳಿಗೆ ಔಟಾದರೂ, ಶಫಾಲಿ (87) ತಮ್ಮ ಆಟ ಮುಂದುವರೆಸಿದರು. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ (58 ರನ್) ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ (24 ಎಸೆತಗಳಲ್ಲಿ 34 ರನ್) ಅವರ ನಿರ್ಣಾಯಕ ಇನ್ನಿಂಗ್ಸ್ಗಳು ತಂಡದ ಮೊತ್ತವನ್ನು 288ಕ್ಕೆ ಏರಿಸಿದವು.
ಲೌರಾ ವೋಲ್ವಾರ್ಡ್ ಹೋರಾಟ ವ್ಯರ್ಥ
ಭಾರತದ ಬೃಹತ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವಾರ್ಡ್ ಏಕಾಂಗಿ ಹೋರಾಟ ನಡೆಸಿದರು. ಅವರು ಆಕರ್ಷಕ 101 ರನ್ಗಳ ಶತಕ ಬಾರಿಸಿದರೂ, ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್ ಎದುರು ಉಳಿದ ಆಟಗಾರ್ತಿಯರು ಹೆಚ್ಚು ಹೊತ್ತು ನಿಲ್ಲಲಾಗದೆ ಮಕಾಡೆ ಮಲಗಿದರು. ದೀಪ್ತಿ ಶರ್ಮಾ ಐದು ವಿಕೆಟ್ ಕಬಳಿಸಿ ಆಫ್ರಿಕಾದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
ಹರ್ಮನ್ಪ್ರೀತ್ ಕೌರ್ ಅವರ ಪ್ರಶಸ್ತಿ ಬರ ನೀಗಿದ ಕ್ಷಣ
ಈ ಗೆಲುವು ನಾಯಕಿ ಹರ್ಮನ್ಪ್ರೀತ್ ಕೌರ್ ಅವರಿಗೆ ಅತ್ಯಂತ ವಿಶೇಷವಾಗಿದೆ. ಈ ಗೆಲುವಿನ ಮೂಲಕ ಅವರು ಹಲವು ವರ್ಷಗಳ ಐಸಿಸಿ ಟೂರ್ನಮೆಂಟ್ಗಳಲ್ಲಿ ಟ್ರೋಫಿ ಎತ್ತಿಹಿಡಿಯಲಾಗದ ತಮ್ಮ ಪ್ರಶಸ್ತಿ ಬರವನ್ನು ಕೊನೆಗೂ ನೀಗಿಸಿಕೊಂಡರು. 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ.
