
ಹಂಟಿಂಗ್ಟನ್ ಬೀಚ್, ಕ್ಯಾಲಿಫೋರ್ನಿಯಾ(ಯುಎಸ್ಎ): ಅಮೆರಿಕದಲ್ಲಿ ಶನಿವಾರ ಹೆಲಿಕಾಪ್ಟರ್ ವೊಂದು ಪತನಗೊಂಡಿತು. ಇದರ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ಜನಪ್ರಿಯ ಕಡಲತೀರದ ಮೇಲೆ ಹಾರಾಡುತ್ತಿದ್ದ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿತು. ನಂತರ ಗಾಳಿಯಲ್ಲಿ ಸುರುಳಿ ಸುರುಳಿಯಾಗಿ ಚಲಿಸಲು ಪ್ರಾರಂಭಿಸಿದೆ. ಅಂತಿಮವಾಗಿ, ಎತ್ತರ ತಲುಪಲು ಸಾಧ್ಯವಾಗದೇ ಧರೆಗಪ್ಪಳಿಸಿತು.
ಹಂಟಿಂಗ್ಟನ್ ಕಡಲತೀರದಲ್ಲಿ ಸೂರ್ಯ ಸ್ನಾನ ಮಾಡುತ್ತಿದ್ದವರು ಮತ್ತು ವೀಕೆಂಡ್ ಅವಧಿಯನ್ನು ಸಂತಸದಿಂದ ಕಳೆಯುತ್ತಿದ್ದವರು ದೃಶ್ಯ ಕಂಡು ದಿಗ್ಭ್ರಮೆಗೊಂಡರು. ಹೆಲಿಕಾಪ್ಟರ್ ಮರಗಳ ಸಾಲಿನ ಮೇಲೆ ಬಿದ್ದಿದೆ. ಅನೇಕ ಮರಗಳು ಹೆಲಿಕಾಪ್ಟರ್ ನ ರೆಕ್ಕೆಗಳಿಗೆ ಸಿಲುಕಿ ತುಂಡು ತುಂಡಾದವು. ಇದನ್ನು ದೃಶ್ಯದಲ್ಲಿ ನೋಡಬಹುದು.
ಘಟನೆಯ ವಿಡಿಯೋವನ್ನು ಜನರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗಳು ವಿಮಾನ ಹಂಟಿಂಗ್ಟನ್ ಬೀಚ್ ಮೇಲೆ ಪ್ರದಕ್ಷಿಣಾಕಾರವಾಗಿ ತಿರುಗಿ, ಕಡಲತೀರದ ಅಂಚಿನಲ್ಲಿ ನೆಲಕ್ಕೆ ಬಿದ್ದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಹೆಲಿಕಾಪ್ಟರ್ ಪತನವಾದ ಸ್ಥಳ ಪೆಸಿಫಿಕ್ ಕರಾವಳಿ ಭಾಗವಾಗಿದ್ದು, ಹೆದ್ದಾರಿಯ ಬಳಿ ನೆಡಲಾದ ಮರಗಳು ಮತ್ತು ಮೆಟ್ಟಿಲುಗಳ ನಡುವೆ ಕಾಪ್ಟರ್ ಸಿಲುಕಿಕೊಂಡಿದೆ.
ಗಾಯಗೊಂಡ ಐವರನ್ನು ಹಂಟಿಂಗ್ಟನ್ ಬೀಚ್ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಲಿಕಾಪ್ಟರ್ ನ ಭಗ್ನಾವಶೇಷಗಳಲ್ಲಿ ಸಿಲುಕಿದ್ದ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು ಎಂದು ಇಲಾಖೆ ಮಾಹಿತಿ ನೀಡಿದೆ.
ರಸ್ತೆಯಲ್ಲಿದ್ದ ಇತರ ಮೂವರು ಗಾಯಗೊಂಡಿದ್ದು, ಅವರಿಗಾದ ಗಾಯಗಳ ಕುರಿತು ವಿವರಗಳು ಲಭ್ಯವಾಗಿಲ್ಲ.
ಹೆಲಿಕಾಪ್ಟರ್ ಪತನಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಈ ಹೆಲಿಕಾಪ್ಟರ್ ಭಾನುವಾರ ಆಯೋಜಿಸಲಾಗಿದ್ದ ಕಾರ್ಸ್ ‘ಎನ್ ಕಾಪ್ಟರ್ಸ್ ವಾರ್ಷಿಕ ನಿಧಿಸಂಗ್ರಹಣೆ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ನ್ಯೂಯಾರ್ಕ್ನ ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಮೂವರು ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದರು. ಪೈಲಟ್ ಮತ್ತು ಸ್ಪೇನ್ನ ಪ್ರವಾಸಿಗರ ಕುಟುಂಬಸ್ಥರು ಮೃತಪಟ್ಟಿದ್ದರು.
ಭಾರತದಲ್ಲಿ ಇತ್ತೀಚಿಗೆ ನಡೆದ ಹೆಲಿಕಾಪ್ಟರ್ ದುರಂತ: ಉತ್ತರಾಖಂಡದ ಕೇದಾರನಾಥ ಸಮೀಪ ಕೆಲವು ತಿಂಗಳ ಹಿಂದೆ ಹೆಲಿಕಾಪ್ಟರ್ ಪತನಗೊಂಡಿತ್ತು. ಮಗು ಸೇರಿ ಏಳು ಮಂದಿ ಸಾವನ್ನಪ್ಪಿದ್ದರು. ಬೆಳಗ್ಗೆ 5.30ರ ಸುಮಾರಿಗೆ ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿತ್ತು ಎಂದು ತಿಳಿದು ಬಂದಿದೆ. ಹೆಲಿಕಾಪ್ಟರ್ ಗೌರಿಕುಂಡ್-ಸೋನ್ಪ್ರಯಾಗ್ ಅರಣ್ಯದಲ್ಲಿ ಅಪಘಾತಕ್ಕೀಡಾಗಿತ್ತು.
ಇದಕ್ಕೆ ಕೆಲವೇ ದಿನಗಳಿಗೆ ಮುನ್ನ, ಜೂನ್ 7ರಂದು ಕೇದಾರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಬಡಾಸು ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಟೇಕ್ಆಪ್ ಆಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರನ್ನು ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯ ಬಡಾಸುವಿನ ಹೆಲಿಪ್ಯಾಡ್ ಸಮೀಪದ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಈ ಕಾಪ್ಟರ್ ಕ್ರಿಸ್ಟಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿತ್ತು. ಪೈಲಟ್ ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಪೈಲಟ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಅಪಾಯದಿಂದ ಬಚಾವಾಗಿದ್ದರು.