
ಬೆಂಗಳೂರು, ಅಕ್ಟೋಬರ್ 13: ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ಮ್ಯಾಪಲ್ಸ್ ಆ್ಯಪ್ (Mappls app) ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್, ಕೌಂಟ್ಡೌನ್ನ ಲೈವ್ ಮಾಹಿತಿ ನೀಡಲು ಆರಂಭಿಸಿದೆ. ಇದು ಪ್ರಯಾಣಿಕರಿಗೆ ಸಂಚಾರದ ವೇಳೆ ಟ್ರಾಫಿಕ್ ಸಿಗ್ನಲ್ ಸಮಯ, ಇನ್ನೆಷ್ಟು ಸೆಕೆಂಡ್ಗಳ ಕಾಲ ಸಿಗ್ನಲ್ ಇರಲಿದೆ ಎಂಬ ರಿಯಲ್ ಟೈಮ್ ಮಾಹಿತಿ ನೀಡುತ್ತದೆ. ಬೆಂಗಳೂರು ನಗರ ಸಂಚಾರ ಪೊಲೀಸ್ (Bengaluru Traffic Police), ಅರ್ಕಾಡಿಸ್ ಇಂಡಿಯಾ (Arcadis India) ಮತ್ತು ಮ್ಯಾಪಲ್ಸ್ (ಮ್ಯಾಪ್ಮೈಇಂಡಿಯಾದಿಂದ ನಡೆಸಲ್ಪಡುತ್ತಿದೆ) ತಾಂತ್ರಿಕ ತಂಡಗಳು ಜಂಟಿಯಾಗಿ ಈ ಉಪಕ್ರಮವನ್ನು ಆರಂಭಿಸಿವೆ. ಬಳಕೆದಾರರು ಟ್ರಾಫಿಕ್ ಸಿಗ್ನಲ್ ಸಮೀಪಿಸುತ್ತಿದ್ದಂತೆಯೇ ಮ್ಯಾಪಲ್ಸ್ ಆ್ಯಪ್ ಟ್ರಾಫಿಕ್ ಸಿಗ್ನಲ್ ಲೈಟ್ನ ಲೈವ್ ಕೌಂಟ್ಡೌನ್ ಮಾಹಿತಿ ನೀಡಲು ಶುರುಮಾಡುತ್ತದೆ. ಸಿಗ್ನಲ್ ಬದಲಾಗಲು ಎಷ್ಟು ಸೆಕೆಂಡುಗಳು ಉಳಿದಿವೆ ಎಂಬುದನ್ನು ನಿಖರವಾಗಿ ತೋರಿಸುತ್ತದೆ.
ಹೇಗೆ ಕೆಲಸ ಮಾಡುತ್ತೆ ಮ್ಯಾಪಲ್ಸ್ ಆ್ಯಪ್?
ಈಗ ಮ್ಯಾಪಲ್ಸ್ ಅಪ್ಲಿಕೇಶನ್ನಲ್ಲಿ ಟ್ರಾಫಿಕ್ ಸಿಗ್ನಲ್ ಸಮಯ ಲೈವ್ ಅಪ್ಡೇಟ್ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು. ಟ್ರಾಫಿಕ್ ಸಿಗ್ನಲ್ ಕೌಂಟ್ಡೌನ್ ಆಗುತ್ತಿದ್ದಂತೆಯೇ ಅಪ್ಲಿಕೇಶನ್ನ ಒಳಗಿನ ನಕ್ಷೆಯಲ್ಲಿ ನೀವು ಅದನ್ನು ನೋಡುತ್ತೀರಿ. ಇದೊಂದು ಅದ್ಭುತವಾಗಿದ್ದು, ವಾಹನ ಸವಾರರಿಗೆ ಪ್ರಯೋಜನವಾಗಲಿದೆ ಎಂದು ಎಂದು ಮ್ಯಾಪ್ಮೈ ಇಡಿಯಾ ನಿರ್ದೇಶಕ ರೋಹನ್ ವರ್ಮಾ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ಈ ಉಪಕ್ರಮ ಆರಂಭಿಸಲು ಸಹಕರಿಸಿದ ಬೆಂಗಳೂರು ಸಂಚಾರ ಪೊಲೀಸ್, ಅರ್ಕಾಡಿಸ್ ಇಂಡಿಯಾ ಹಾಗೂ ಮ್ಯಾಪ್ಮೈ ಇಡಿಯಾ ತಂಡಕ್ಕೆ ಧನ್ಯವಾದಗಳು. ಇಂಥದ್ದೊಂದು ಉಪಕ್ರಮ ಆರಂಭಿಸಿರುವುದು ಭಾರತದಲ್ಲೇ ಮೊದಲು! ಇದು ಮತ್ತು ಇಂಥ ಇನ್ನೂ ಹಲವು ಆವಿಷ್ಕಾರಗಳನ್ನು ಮ್ಯಾಪ್ಮೈ ಇಡಿಯಾ ಮಾಡಿದ್ದು, ಎಲ್ಲ ಭಾರತೀಯರಿಗೂ ನೆರವಾಗುತ್ತಿದೆ ಎಂದು ಎಕ್ಸ್ ಸಂದೇಶದಲ್ಲಿ ಅವರು ಉಲ್ಲೇಖಿಸಿದ್ದಾರೆ.
ರೋಹನ್ ವರ್ಮಾ ಎಕ್ಸ್ ಸಂದೇಶ
Can you see the live traffic signal timings showing up on Mappls app? As the real traffic signal counts down, you see the same on the map inside Mappls app. Magical, and helpful 🙂
Live in Bangalore now thanks to @blrcitytraffic n Arcadis India, and the work done by team @mappls… pic.twitter.com/mA96gaZykd
— Rohan Verma (@_rohanverma) October 11, 2025
ರೋಹನ್ ವರ್ಮಾ ಎಕ್ಸ್ ಸಂದೇಶಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ. ಆಗಾಗ್ಗೆ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ಬೆಂಗಳೂರು ನಗರದಲ್ಲಿ ಈ ಪ್ರಯೋಗ ಮಾಡಿರುವುದು ಉತ್ತಮ. ಇಲ್ಲಿ ಇದು ಯಶಸ್ವಿಯಾದರೆ, ಮುಂಬರುವ ತಿಂಗಳುಗಳಲ್ಲಿ ಇತರ ಮೆಟ್ರೋ ನಗರಗಳಲ್ಲಿಯೂ ಇದನ್ನು ಪರಿಚಯಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ, ‘‘ಇದರ ಉಪಯೋಗವೇನು ಎಂಬುದೇ ನಿಜವಾದ ಪ್ರಶ್ನೆ’’ ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವರ್ಮಾ, ಉದಾಹರಣೆಗೆ; ನೀವು 500 ಮೀಟರ್ ದೂರದಲ್ಲಿರುವಾಗ ಟ್ರಾಫಿಕ್ ಲೈಟ್ ಕೆಂಪು/ಹಸಿರು ಬಣ್ಣಕ್ಕೆ ತಿರುಗಲು ಎಷ್ಟು ಸಮಯ ಉಳಿದಿದೆ ಎಂಬುದು ಆ್ಯಪ್ನಿಂದ ನಿಮಗೆ ತಿಳಿಯುತ್ತದೆ. ದೈನಂದಿನ ವಾಹನ ಚಾಲನೆಯ ಜೊತೆಗೆ, ಅನೇಕ ತುರ್ತು ಸಂದರ್ಭಗಳಲ್ಲಿ ಇದು ನೆರವಿಗೆ ಬರಬಹುದು ಎಂದಿದ್ದಾರೆ.
‘‘ಈ ವೈಶಿಷ್ಟ್ಯವು ಗೂಗಲ್ನಲ್ಲಿಯೂ ಲಭ್ಯವಿಲ್ಲ ಎಂಬುದಾಗಿ ಭಾವಿಸುತ್ತೇನೆ’’ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.