ಬೆಂಗಳೂರು, ಅಕ್ಟೋಬರ್‌ 14: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪವರ್‌ ಶೇರಿಂಗ್‌ ಸದ್ದು ಮಾಡುತ್ತಲೇ ಇದೆ. ಆದರೆ, ಎರಡು ವರ್ಷವಾದ್ರೂ ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಯಾವುದೇ ಕ್ಲಾರಿಟಿ ಕೊಟ್ಟಿಲ್ಲ. ಈ ಗೊಂದಲಕ್ಕೆ ತೆರೆ ಎಳೆಯಬೇಕಾದ ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಈ ಪ್ರಶ್ನೆಗೆ ಮೌನಕ್ಕೆ ಶರಣಾಗಿದ್ದಾರೆ.

ನವೆಂಬರ್‌ ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯ ಆಯ್ಕೆ ಎಂಬ ಸಾಲು ಸಾಲು ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ನವೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರು ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಗುಸು ಗುಸು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಚರ್ಚೆಗಳು ಸದ್ಯ ಕರ್ನಾಟಕ ಕಾಂಗ್ರೆಸ್‌ನೊಳಗೆ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಕೋಲ್ಡ್ ವಾರ್’ ಅನ್ನು ಮತ್ತಷ್ಟು ತೀವ್ರಗೊಳಿಸಿದೆ. ಹಾಗಾದ್ರೆ, ಖರ್ಗೆಯವರ ಮೌನದ ಹಿಂದಿನ ಮರ್ಮವೇನು? ಸಿದ್ದು-ಡಿಕೆಶಿ ನಡುವಿನ ಅಧಿಕಾರ ಜಟಾಪಟಿಯ ಮುಂದಿನ ನಡೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಇದೀಗ ಪ್ರಿಯಾಂಕ್‌ ಖರ್ಗೆ ಅವರು ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನವನ್ನ ಸೃಷ್ಟಿಸಿದೆ.

ನವೆಂಬರ್‌ನಲ್ಲಿ ಸರ್ಕಾರ ರಚನೆಯಾಗಿ ಭರ್ತಿ ಎರಡೂವರೆ ವರ್ಷ ತುಂಬಲಿದೆ, ಅಲಿಖಿತ ಒಪ್ಪಂದದಂತೆ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡಬೇಕು, ಡಿಕೆ ಶಿವಕುಮಾರ್‌ ಸಿಎಂ ಆಗಬೇಕು. ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಯಾವುದೇ ಕ್ಲಾರಿಪಿಕೇಷನ್‌ ಸಿಕ್ಕಿಲ್ಲ, ಇದು ಈಗ ಇಡೀ ಕೈ ಪಾಳೆಯವನ್ನು ನಿದ್ದೆಗೆಡಿಸಿದೆ. ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಹೈಕಮಾಂಡ್‌ ಮೌನ ವಹಿಸಿದ್ದು ಎಲ್ಲರನ್ನೂ ಚಿಂತಗೀಡು ಮಾಡಿದೆ. ಈ ಬಗ್ಗೆ ಮಲ್ಲಿಕಾರ್ಜುನ್‌ ಖರ್ಗೆ ಮೌನವಹಿಸಿದ್ದು, ಸಿಎಂ ಬದಲಾವಣೆ ಚರ್ಚೆ ಇನ್ನೂ ಜೀವಂತವಾಗಿದೆ” ಎಂಬ ಸಂದೇಶವನ್ನು ಎರಡೂ ಬಣಗಳಿಗೆ ರವಾನಿಸಿದಂತಿದೆ.

ಇನ್ನೂ ನವೆಂಬರ್‌ಗೆ ಸಚಿವ ಸಂಪುಟ ಪುನರ್‌ರಚನೆ ಕುರಿತು ಹೈಕಮಾಂಡ್‌ ಈಗಾಗಲೇ ಗ್ರೀನ್‌ ಸಿಗ್ನಿಲ್‌ ನೀಡಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಇತ್ತ ಸಿಎಂ ಬದಲಾವಣೆ ಕುರಿತು ಸೈಲೆಂಟ್‌ ಆಗಿರುವುದು ಹೈಕಮಾಂಡ್‌ನ ರಣತಂತ್ರವೇ ಎಂಬ ಅನುಮಾನವೂ ದಟ್ಟವಾಗಿದೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಸರ್ವಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಗಾದಿಗೇರಲು ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಿದ್ದಾರೆ. ಇದರ ನಡುವೆ ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಿಯಾಂಕ್‌ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.

“ಕರ್ನಾಟಕದ ಸಾರ್ವಜನಿಕ ಸ್ಥಳದಲ್ಲಿ RSS ಚಟುವಟಿಕೆ ನಿರ್ಬಂಧ: ಸಿ.ಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ”
ನವೆಂಬರ್‌ಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡೂವರೆ ವರ್ಷ ಪೂರೈಸಲಿದೆ. ಈ ಸಂದರ್ಭದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮಂತ್ರಿ ಸ್ಥಾನವನ್ನ ನೀಡುವುದು ಅನಿವಾರ್ಯವಾಗಿದೆ. ಈಗಾಗಲೇ ಮಂತ್ರಿ ಸ್ಥಾನಕ್ಕಾಗಿ ಹಲವು ಕಾಂಗ್ರೆಸ್‌ ಹಿರಿಯ ಶಾಸಕರು ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದ್ದು, ನವೆಂಬರ್‌ ನಲ್ಲಿ ಸಚಿವ ಸಂಪುಟ ಪುನರ್‌ರಚನೆಯಾಗಲಿದೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ 15 ಸಚಿವರಿಗೆ ಕೊಕ್‌ ಕೊಟ್ಟು ಹೊಸಬರಿಗೆ ಹಾಗೂ ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನವನ್ನ ನೀಡಬೇಕು ಎಂದು ಹೈಕಮಾಂಡ್‌ ಲೆಕ್ಕಾಚಾರವನ್ನ ಹಾಕಿಕೊಂಡಿದೆ. ಈ ವೇಳೆಯೇ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ಒಲಿದು ಬರಲಿದೆ ಎಂದು ಹೇಳಲಾಗಿದೆ

About The Author

By Admin

Leave a Reply

Your email address will not be published. Required fields are marked *