
ಹರಿಯಾಣ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪ್ರಿಯಾಂಕಾ ಗಾಂಧಿ ಹೇಳಿಕೆ
ಹರಿಯಾಣ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ (ಅಕ್ಟೋಬರ್ 14, 2025) ಪ್ರತಿಕ್ರಿಯಿಸಿದ್ದು, ಈ ಘಟನೆಯು ದೇಶಕ್ಕೆ ಕಳಂಕ ಎಂದು ಹೇಳಿದ್ದಾರೆ.
ದಲಿತ ಸಮುದಾಯದವರು ಬಿಜೆಪಿ ಆಡಳಿತದಲ್ಲಿ ಸುರಕ್ಷಿತರಾಗಿಲ್ಲ ಮತ್ತು ಅವರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು, ಜಾತಿ ಆಧಾರಿತ ಕಿರುಕುಳದಿಂದ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
“ಈ ಸಂಪೂರ್ಣ ಘಟನೆಯು ಬಿಜೆಪಿ ಆಡಳಿತದಲ್ಲಿ ಉನ್ನತ ಸ್ಥಾನಗಳನ್ನು ತಲುಪಿದ ನಂತರವೂ ದಲಿತ ಸಮುದಾಯದವರು ಸುರಕ್ಷಿತರಾಗಿಲ್ಲ, ಅವರಿಗೆ ನ್ಯಾಯವೂ ಸಿಗುತ್ತಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಇಂತಹ ಅವಮಾನಕರ ಘಟನೆಗಳು ದೇಶ ಮತ್ತು ಸಮಾಜಕ್ಕೆ ಕಳಂಕ” ಎಂದು ಅವರು ಹೇಳಿದ್ದಾರೆ.
ಕುಮಾರ್ ಅವರ ಕುಟುಂಬವು ನ್ಯಾಯಕ್ಕಾಗಿ ಅಲೆದಾಡುತ್ತಿದೆ, ಆದರೆ ಯಾರೂ ಗಮನ ನೀಡುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ದೂರಿದ್ದಾರೆ.