ನೆಲಮಂಗಲ: (ಅಕ್ಟೋಬರ್ 24, 2025): ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಟಿ. ಬೇಗೂರು ಬಳಿ ನಡೆದಿದೆ.
ಸಂಭವಿಸಿದ್ದೇನು?:
ಗದಗ ಜಿಲ್ಲೆಯ ರೋಣಾದಿಂದ ಬೆಂಗಳೂರಿನತ್ತ ಬರುತ್ತಿದ್ದ ಮಾರುತಿ ಎರ್ಟಿಗಾ ಕಾರು (KA 26 N 1435), ಮುಂಭಾಗ ಸಾಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಕಾರಣ, ನಿಯಂತ್ರಣ ಕಳೆದುಕೊಂಡ ಕಾರು ತೀವ್ರವಾಗಿ ಡಿಕ್ಕಿ ಹೊಡೆದಿದೆ.
ಈ ದುರಂತದಲ್ಲಿ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಶಿವಲಿಂಗ ಗೌಡ (60) ಮತ್ತು ಪ್ರಮೀಳಾ (55) ಎಂದು ಗುರುತಿಸಲಾಗಿದೆ.
ಆಸ್ಪತ್ರೆಗೆ ತೆರಳುತ್ತಿದ್ದ ಕುಟುಂಬ:
ಮೃತಪಟ್ಟವರು ಒಂದೇ ಕುಟುಂಬದ ಸದಸ್ಯರಾಗಿದ್ದು, ಬೆಂಗಳೂರಿನ ನಾರಾಯಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆಯಾಗಿತ್ತು.
