
India vs Australia Women’s Cricket: 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 330 ರನ್ ಗಳಿಸಿದರೂ, ಬೌಲಿಂಗ್ ವೈಫಲ್ಯದಿಂದ ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ಗೆದ್ದಿತು. ಇದು ಭಾರತಕ್ಕೆ ಸತತ ಎರಡನೇ ಸೋಲಾಗಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಬ್ಯಾಟಿಂಗ್ ಉತ್ತಮವಾಗಿದ್ದರೂ, ಕೊನೆಯ ಹಂತದಲ್ಲಿ ಬೌಲಿಂಗ್ ಕೈಕೊಟ್ಟಿತು.
2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 13 ನೇ ಲೀಗ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾದ ಮಹಿಳಾ ತಂಡಗಳ ನಡುವೆ ವಿಶಾಖಪಟ್ಟಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 330 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನು ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ಗಳ ಜಯ ಸಾಧಿಸಿತು. ಇದು ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸತತ ಎರಡನೇ ಸೋಲಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿತ್ತಾದರೂ, ಬೌಲಿಂಗ್ ವಿಭಾಗದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಹೀಗಾಗಿ ತಂಡ ಕೊನೆಯ ಹಂತದಲ್ಲಿ ಸೋಲಿಗೆ ಕೊರಳೊಡ್ಡಬೇಕಾಯಿತು.
ಭಾರತಕ್ಕೆ ಭರ್ಜರಿ ಆರಂಭ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ 155 ರನ್‌ಗಳ ಜೊತೆಯಾಟವಾಡಿದರು. ಸ್ಮೃತಿ ರೂಪದಲ್ಲಿ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಸ್ಮೃತಿ 66 ಎಸೆತಗಳಲ್ಲಿ 80 ರನ್ ಗಳಿಸಿ ಔಟಾದರು. ಅದಾದ ನಂತರ, ಆಸ್ಟ್ರೇಲಿಯಾ ನಿಯಮಿತ ಅಂತರದಲ್ಲಿ 3 ವಿಕೆಟ್ ಉರುಳಿಸಿತು. ಪ್ರತಿಕಾ ರಾವಲ್ 75 ರನ್ ಗಳಿಸಿ ಔಟಾದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 22 ರನ್ ವಿಕೆಟ್ ಒಪ್ಪಿಸಿದರು. ಹರ್ಲೀನ್ ಡಿಯೋಲ್ 38 ರನ್ ಗಳಿಸಿದರು. ಆ ನಂತರ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಐದನೇ ವಿಕೆಟ್‌ಗೆ ನಿರ್ಣಾಯಕ ಅರ್ಧಶತಕದ ಪಾಲುದಾರಿಕೆಯನ್ನು ನೀಡಿದರು.
ಕೊನೆಯಲ್ಲಿ ಎಡವಿದ ಟೀಂ ಇಂಡಿಯಾ
ಜೆಮಿಮಾ ಮತ್ತು ರಿಚಾ ಐದನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡಿದರು. ಆದಾಗ್ಯೂ ರಿಚಾ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 32 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಇಲ್ಲಿಂದ ಬೇಗನೆ ಟೀಂ ಇಂಡಿಯಾ ಮೇಲೆ ಒತ್ತಡ ಹೇರಿ 50 ಓವರ್‌ಗಳಿಗೆ ಮೊದಲೇ ಆಲೌಟ್ ಮಾಡಿತು. ಜೆಮಿಮಾ 33 ರನ್, ಅಮನ್‌ಜೋತ್ ಕೌರ್ 16 ರನ್, ದೀಪ್ತಿ ಶರ್ಮಾ ಮತ್ತು ಕ್ರಾಂತಿ ಗೌಡ್ ಇಬ್ಬರೂ ತಲಾ 1ರನ್ ಗಳಿಸಿ ಔಟಾದರು. ಶ್ರೀ ಚರಣಿ ಔಟಾಗುವುದರೊಂದಿಗೆ ಭಾರತದ ಇನ್ನಿಂಗ್ಸ್ ಕೊನೆಗೊಂಡಿತು. ಸ್ನೇಹ್ ರಾಣಾ 8 ರನ್ ಗಳಿಸಿ ಔಟಾಗದೆ ಉಳಿದರು. ಅನಾಬೆಲ್ 5 ವಿಕೆಟ್ ಪಡೆದರೆ, ಸೋಫಿ ಮೊಲಿನೆಕ್ಸ್ 3 ಹಾಗೂ ಮೇಗನ್ ಶುಟ್ ಮತ್ತು ಆಶ್ಲೇ ಗಾರ್ಡ್ನರ್ ಇಬ್ಬರೂ ತಲಾ 1 ವಿಕೆಟ್ ಪಡೆದರು.
ಗೆಲುವಿನ ಇನ್ನಿಂಗ್ಸ್ ಆಡಿದ ನಾಯಕಿ
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕ ಜೋಡಿ ಅಲಿಸಾ ಹೀಲಿ ಮತ್ತು ಫೋಬೆ ಲಿಚ್‌ಫೀಲ್ಡ್ ತ್ವರಿತ ಆರಂಭ ನೀಡಿ ಕೇವಲ 11.2 ಓವರ್‌ಗಳಲ್ಲಿ 85 ರನ್ ಕಲೆಹಾಕಿದರು. ನಂತರ ನಾಯಕಿ ಅಲಿಸಾ ಹೀಲಿ ಕೇವಲ 84 ಎಸೆತಗಳಲ್ಲಿ ತಮ್ಮ ಆರನೇ ಏಕದಿನ ಶತಕ ಬಾರಿಸಿದರು. ಏತನ್ಮಧ್ಯೆ, ಎಲಿಸ್ ಪೆರ್ರಿ ಗಾಯಗೊಂಡು ನಿವೃತ್ತರಾದರು, ಇತ್ತ ಬೆತ್ ಮೂನಿ ಮತ್ತು ಸದರ್ಲ್ಯಾಂಡ್ ಕೂಡ ಬೇಗನೇ ಔಟಾದರು. ಆದಾಗ್ಯೂ, ಹೀಲಿ, ಆಶ್ಲೀ ಗಾರ್ಡ್ನರ್ ಜೊತೆಗೆ 95 ರನ್‌ಗಳ ಭರ್ಜರಿ ಜೊತೆಯಾಟವನ್ನು ನಡೆಸಿ ತಂಡದ ಗೆಲುವನ್ನು ಖಚಿತಪಡಿಸಿದರು.